Tuesday, November 12, 2024

ಗುಳ್ಳೆ ನರಿ ಗೋಲ್ಡನ್ ಶೆಫರ್ಡ್ ಆದ ಕಥೆ 

The Golden Jackal  



ವಾರಾಂತ್ಯ ಬಂದರೆ ಸಾಕು ಕ್ಯಾಮಾರ ಕೊರಳಿಗೆ ನೇತಾಕಿಕೊಂಡು ಯಾವುದೊ ಕಾಡು ಮೇಡುಗಳಲ್ಲಿ ಅಲೆಯುತ್ತಾ ಇದ್ದುಕೊಂಡು ಏನಾದ್ರು ಅಪರೂಪದ ಪ್ರಾಣಿಯೋ ಪಕ್ಷಿಯೋ ಸಿಗುತ್ತದೆ ಎಂದು ಕಾಡುಗಳಲ್ಲಿ ತಿರುಗುವ ನಮಗೆ ಅವತ್ತು ಏನಾದರೂ ಅಪರೂಪದ ಜೀವಿ ಸಿಕ್ಕಿಬಿಟ್ಟರೆ ಆ ಸಂತೋಷಕ್ಕೆ ಪಾರವೇ ಇಲ್ಲ ನೋಡಿ. ರಾಜಾ ದಿನಗಳು ಅದು ಹೇಗೆ ಮುಗಿದು ಹೋಗುತ್ತವೆ ಎಂದರೆ ಬೆಳಿಗ್ಗೆ ಕಾಡುಗಳಲ್ಲಿ ಕಾಲಿಟ್ಟವರು ಮತ್ತೆ ಹೊರ ಬೀಳುವುದು ಒಮ್ಮೆ ಮದ್ದ್ಯಾನದ ನಂತರವೇ.

ಅಂದು ರವಿವಾರದ ಒಂದು ಸುಂದರ ನಸುಕಿನ ಚಳಿಯಲ್ಲಿ ಮಲಗಿದ್ದ ನನಗೆ ನಿದ್ದೆಯಿಂದ ಎಬ್ಬಿಸಿದ್ದು ಗೆಳೆಯ ಮಹೇಶನ ಫೋನ್ ಕಾಲ್. ಆಕಡೆಯಿಂದ ಮಹೇಶ " ನಡಿಯಪ್ಪಾ ಇನ್ನು ಮಲಗಿದ್ದೀಯ ಅಲ್ಲ ? ಇವತ್ತು ರವಿವಾರ ಅಂದ. ಅರ್ಧ ಘಂಟೆಯಲ್ಲಿ ನಾನ್ ಆಲ್ಲಿರ್ತೀನಿ ಅಂದೆ. ಹೇಗೂ ನಾವು ವಾಪಸು ಬರೋದು ತಡವಾಗುತ್ತೆ ಬರುವಾಗ ದಾರಿಯಲ್ಲಿ ಪೂರಿ ಪಾರ್ಸೆಲ್ ಕಟ್ಟಿಸಿಕೊಂಡು ಬಾ ಅಂದು ಫೋನ್ ಇಟ್ಟಾ.


ಸಮಯ ಬೆಳಿಗ್ಗೆ 7 ಘಂಟೆ. ಒಂದು ಸುಂದರವಾದ ಕುರಚಲು ಕಾಡು. ಎಲ್ಲೆಲ್ಲಿಯೂ ಹಕ್ಕಿಗಳ ನಿನಾದ. ಅಲ್ಲೆಲ್ಲೋ ಒಂದು ಹದ್ದು ಸದ್ದು ಮಾಡುತ್ತಿದೆ. ಬೆಳಗಿನ ಸಣ್ಣನ್ನೇ ತಂಗಾಳಿ. ಒಟ್ಟಿನಲ್ಲಿ ಅಲ್ಲಿರುವ ಎಲ್ಲ ಜೀವಸಂಕುಲಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತವಾಗಿದ್ದವು. ಅದೇ ಬೆಳಗಿನ ಹುಮ್ಮಸ್ಸಿನಲ್ಲಿ ನಾವು ಸುಮಾರು ಎರಡು ಘಂಟೆಗಳ ಕಾಲ ಆ ಕುರಚಲು ಕಾಡಿನಲ್ಲಿ ತಿರುಗಾಡಿ ಸಿಕ್ಕ ಸಿಕ್ಕ ಹಕ್ಕಿಗಳ ಫೋಟೋ ತೆಗೆದು ದಣಿದಿದ್ದ ನಮಗೆ ವಿಶ್ರಾಂತಿಗೆ ಒಂದು ದೊಡ್ಡ ಬಂಡೆಯ ತಂಪಾದ ನೆರಳಿನ ಕೆಳಗೆ ಕುಳಿತು ಆ ಕುರಚಲು ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತಿದ್ದೆವು. ಹೊಟ್ಟೆ ಹಸಿದರಿಂದ ಪಾರ್ಸಲ್ ತಂದ ಪೂರಿಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಿದೆವು.

ಅದೋ ಸ್ಮಶಾನ ಮೌನ. ನಾನು ಅಲ್ಲೇ ಕುಂತೆ. ಮಹೇಶಾ ಸುತ್ತ ಮುತ್ತ ಅಡ್ಡಾಡಿ ಫೋಟೋ ತೆಗೆಯುತ್ತಿದ್ದ. ನಾನು ಒಬ್ಬನೇ ಆಗಿರುವುದರಿಂದ ಕೊಂಚ ಭಯವು ಆಯ್ತು. ಲೋ ಮಹೇಶಾ ಇಲ್ಲೇ ಬಾ ಅನ್ನುವ ಹೊತ್ತಿಗೆ ದೊತ್ತೆಂದು ಶಬ್ದ ಗಿಡಗಳ ನಡುವೆಯಿಂದ ಬಂತು ಗಾಬರಿಗೊಂಡು ಮಹೇಶ ಓಡಿ ಬಂದು "ಏನ್ ಅದು ಅಂದ" ಗೊತ್ತಿಲ್ಲ ಎಂದು ಹೆದರಿಕೊಂಡೇ ಹೇಳಿದೆ. ' ಯಾವುದೊ ನಾಯಿ ಇರಬೇಕು ಅದು' ಎಂದು ಕೊಂಚ ಅನುಮಾನದಿಂದಲೇ ಹೇಳಿದ ಮಹೇಶಾ !!!


ಸೂರ್ಯ ಇನ್ನೇನು ನೆತ್ತಿಗೆ ಬರುವ ಸಮಯವಾಗಿತ್ತು ನಾವು ಹೊರಡಲು ನಿರ್ಧರಿಸಿ ಅಲ್ಲಿಂದ ಕಾಲ್ಕಿತ್ತೆವು. ಬರುವಾಗ ಮಹೇಶಾ ಹೇಳಿದ ಅದು ನಾಯಿ ಅಲ್ಲ ನರಿ ಇರಬಹುದೇನೋ ಎಂದು ನನ್ನ ಅನುಮಾನ ಎಂದು. ನನಗು ಹಾಗೆ ಅನ್ನಿಸಿತು ಎಂದು ಹೇಳುತ್ತಾ ಸಾಗುವಾಗ ನಮ್ಮ ದಾರಿಯ ಮುಂದೆ ಆಶ್ಚರ್ಯ್ರವೇ ಕಾದಿತ್ತು. ನರಿಯೊಂದು ನಮ್ಮಿಬ್ಬರನ್ನು ನೋಡುತ್ತಾ ನಿಂತಿದೆ. ಇಬ್ಬರು ನಿಂತಲ್ಲಿಯೇ ನಿಂತು ಒಂದು ಕ್ಷಣ ಗಾಬರಿಗೊಂಡೆವು. ಧೈರ್ಯ ಮಾಡಿ ಎರಡು ಫೋಟೋ ಕ್ಲಿಕ್ಕಿಸಿದ್ದೆ ತಡ ಅಲ್ಲಿದ್ದ ಪೊದೆಯೊಳಗೆ ಮಾಯವಾಯಿತು. ನಿಬ್ಬೆರಗಾಗಿ ನಿಂತ ನಾವು ಮುಖ ಮುಖ ನೋಡಿಕೊಂಡು ನಕ್ಕೆವು ವಿನಃ ಮಾತಾಡಲಿಲ್ಲ.

ಆ ಎರಡೇ ಎರಡು ಫೋಟೋ ಸಿಕ್ಕ ನನಗೆ ಯಾವ ಮಟ್ಟಕ್ಕೆ ಕುಶಿಯಾಗಿತ್ತೆಂದರೆ ಆ ಕಾಡನ್ನು ಬಿಟ್ಟು ಹೋಗೋ ಮನಸೇ ಆಗಲಿಲ್ಲ. 'ಮಹೇಶ ಇನ್ನು ಸ್ವಲ್ಪ ಇದ್ದು ಹೋಗೋಣ' ಎಂದೇ. ಸರಿ ಎಂದು ತಲೆಯಲ್ಲಾಡಿಸಿದ ಮಹೇಶಾ. ಅಲ್ಲೇ ಇದ್ದ ಒಂದು ನೀರಿನ ಹೊಂಡದ ಪಕ್ಕ ಗಿಡದ ನೆರಳಿಗೆ ಕುಳಿತೆವು. ನಾನು ಅದೇ ಎರಡು ಫೋಟೋಗಳನ್ನು ಪದೇ ಪದೇ ನೋಡುತಿದ್ದೆ. ಕುಳಿತು ಅರ್ಧ ಘಂಟೆಯಾಗಿತ್ತು.


ಅಂದು ನಮ್ಮ ಅದೃಷ್ಟ ಹೇಗಿತ್ತು ಅಂದರೆ. ಹೇಳುತ್ತೇನೆ ಕೇಳಿ. ನಾನು ಆ ಹೊಂಡದಲ್ಲಿದ್ದ ಪಕ್ಷಿಗಳ ಚಿತ್ರಗಳನ್ನು ತೆಗೆಯುತ್ತಿರಬೇಕಾದರೆ, ಮಹೇಶಾ ಗಾಬರಿಗೊಂಡು ಮೂಕಸನ್ನೆಯಿಂದ ನನನ್ನು ಕರೆದು "ಅಲ್ಲ್ನೋಡು ಮತ್ತೆ ಬಂದಿದೆ" ಎಂದ. ನಾನು ಮರು ಮಾತಾಡದೆ ಎಷ್ಟು ಸಾಧ್ಯ ಆಗುತ್ತೋ ಅಷ್ಟು ಚಿತ್ರ ತೆಗೆದೇ. ಪಾಪ ಅದಕ್ಕೆ ಅದೆಷ್ಟು ನೀರಿನ ದಾಹ ಆಗಿತ್ತು ಅಂದರೆ ಅದು ನೀರು ಕುಡಿಯಲು ಬಂದಿತ್ತು.

ವಾಸ್ತವವಾಗಿ ನರಿಗಳು ಅಂಜುಬುರುಕ ಪ್ರಾಣಿ. ಮನುಷ್ಯರನ್ನು ಕಂಡರೆ ಓಡಿ ಹೋಗಿಬಿಡುತ್ತದೆ. ಆದರೆ ಅದಕ್ಕೆ ನೀರಿನ ಅವಶ್ಯಕತೆ ತುಂಬಾ ಇರುವುದರಿಂದ ನಾವು ಇದ್ದರು ಸಹ ಧೈರ್ಯ ಮಾಡಿ ಅಂಜುತ್ತಲೇ ತನ್ನ ನೀರಿನ ದಾಹವನ್ನು ತೀರಿಸಿಕೊಂಡಿತು. ನೀರು ಕುಡಿದು, ತನ್ನ ಮೈಯನ್ನು ಹಸಿ ಮಾಡಿಕೊಂಡು, ಮೈ ಜಾಡಿಸಿ ಅಲ್ಲಿಂದ ನಿರ್ಗಮಿಸಿತು.


ಇದಾದ ನಂತರ ಶ್ವಾನಪ್ರಿಯನಾದ ಮಹೇಶ ಈ ನರಿ ನೋಡೋಕೆ ಜರ್ಮನ್ ಶೆಫರ್ಡ್ ತರಾನೇ ಇದೆ ಅಲ್ವ ಅಂತ ಕೇಳ್ದ.. ಹೂ ಅಂದೇ ... ಸೊ ಇದಕ್ಕೆ ಗೋಲ್ಡನ್ ಜ್ಯಾಕಲ್ ಅಂತ ಇಂಗ್ಲಿಷ್ ಅಲ್ಲಿ ಕರೀತಾರೆ ಅಲ್ವ.. ನಾವು ಇದನ್ನ ಗೋಲ್ಡನ್ ಶೆಫರ್ಡ್ ಅಂತ ಮರುನಾಮಕರಣ ಮಾಡೋಣ ಅಂದ... ಫೋಟೋ ಸಿಕ್ಕ ಗುಂಗಿನಲ್ಲಿ ಇದ್ದ ನಾನು ಮಹೇಶ ಏನ್ ಹೇಳಿದ್ರು ಹು ಹು ಅಂತ ತಲೆಯಾಡಿಸುತ್ತಾ .... ಇಬ್ಬರು ನರಿಯ ವಾಸ್ತವ ಜೀವನದ ಕಷ್ಟಗಳು, ಅಳಿವಿನಂಚಿಗೆ ತಲುಪಿದ ಅದರ ಸ್ಥಿತಿ, ಆಹಾರಕ್ಕೆ ಪರದಾಡುವಂತಹ ಅದರ ಕಷ್ಟ ಇವೆಲ್ಲ ನೆನೆಯುತ್ತ ಬೇಜಾರಿನಲ್ಲಿ ಮನೆಯ ದಾರಿ ಹಿಡಿದೆವು..


-ಪ್ರಭು ಗುಡಿಮನಿ
9686090045

1 comment: